Monday, April 4, 2016

ಗುರುವಿನ ಮಹಿಮೆ


1. ಪರತತ್ವ ತನ್ನೊಳಗೆ ಎರವಿಲ್ಲದಿರುತಿರಲು 
ಪರದೇಶಿಯಾಗಿ ಇರುತಿರುವಾತನ 
ಪರಮ ಗುರುವೆಂಬೆ ಸರ್ವಜ್ಞ ||

2. ಹರ ತನ್ನ ದೊಳಗಿರ್ದ ಗುರು ತೋರಲರಿಯನೆ
ಮರನೊಳಗಗ್ನಿ ಇರುತಿರ್ದು-ತನ್ನ ತಾ-
ನರಿವುದನು ಕಂಡೆ ಸರ್ವಜ್ಞ ||


3. ಊರಿಂಗೆ ದಾರಿ ಯಾರು ತೋರಿದೆಡೇನು 
ಸಾರಾಯಮಪ್ಪ ಮತವನರುಪಿಸುವ ಗುರು
ತಾನಾರಾದೊಡೇನೆ ಸರ್ವಜ್ಞ ||

4. ಗುರುವಿಂದ ದೈವಗಳು ಗುರುವಿಂದ ಬಂಧುಗಳು
ಗುರುವಿಂದಲೇ ಸಕಲ ಪುಣ್ಯಂಗಳು ಲೋಕಕ್ಕೆ
ಗುರುವೀಗ ದೈವ ಸರ್ವಜ್ಞ ||

5. ಬಳ್ಳಿ ಕುರುಡರು ಸೇರಿ ಹಳ್ಳವನು ಬಿದ್ದಂತೆ
ಒಳ್ಳೇಯ ಗುರುವಿನುಪದೇಶ ಇಲ್ಲದವ- 
ಗೆಲ್ಲಿಯ ಮುಕ್ತಿ ಸರ್ವಜ್ಞ ||

6. ಗುರುವ ನರನೆಂದವಗೆ ಹರನ ಶಿಲೆಯೆಂದವಗೆ
ಗುರುಪ್ರಸಾದವನೆಂಜಲೆಂದವಗೆ-
ನರಕ ತಪ್ಪುವುದೆ ಸರ್ವಜ್ಞ ||

7. ಗುರುವ ನಿಂದಿಸಬೇಡ ಪರವ ಹಳಿಯಲು ಬೇಡ 
ಬರೆವನ ಕೂಡ ಹಗೆ ಬೇಡ-ಭಂಗಾರ-
ದೆರವು ಬೇಡವೇ ಬೇಡ ಸರ್ವಜ್ಞ ||

8. ಸುರಧೇನುವಿನ ಮೊಲೆಯ ಕರೆವ ಗುರು ಶಿಷ್ಟರಿಗೆ
ದುರಿತ ಕೋಟಿಗಳು ಪರಿಹರಿಸಲಾ ಸುಧೆಯ-
ನೆರೆ ಸುಖಿಸಲಕ್ಕು ಸರ್ವಜ್ಞ ||

9. ಕೊರಡು ಸುರ ತರುವಾಯ್ತು ಬರಡು ನೆರೆ ಹಯನಾಯ್ತು 
ಮರುಳ ತಂಡಗಳು ಪ್ರಣವನುಚ್ಚರಿಸುವವು ಶ್ರೀ- 
ಗುರುವಾಜ್ಞೆ ಗಂಜಿ ಸರ್ವಜ್ಞ ||

10. ನಂಬು ಪರಶಿವನೆಂದು ನಂಬು ಗುರು ಚರಣವನು
ನಂಬಲಗಸ್ತ್ಯ ಕುಡಿದನು ಶರಧಿಯನು 
ನಂಬು ಗುರುಪದವ ಸರ್ವಜ್ಞ ||

11. ಮುಂದನರಿಯದ ಗುರುವು ಹಿಂದನರಿಯದ ಶಿಷ್ಯ
ಸಂದೆರಡು ವರ್ಗವರಿಯದ ಉಪದೇಶ ತಾ-
ಕೊಂದು ಕೂಗುವುದು ಸರ್ವಜ್ಞ ||

12. ಗುರುವಿಂಗೆ ದೈವಕ್ಕೆ ಹಿಂದು ಅಂತರವುಂಟು
ಗುರು ತೊರೆ ದೈವದೆಡೆಯನ್ನು ದೈವ ತಾ 
ಗುರುವ ತೋರುವುದು ಸರ್ವಜ್ಞ ||

13. ಕಲ್ಲು ಕಲ್ಲೆಂದರೆ ಕಲ್ಲಲ್ಲಿಹುದೇ ದೈವ 
ಕಲ್ಲಲ್ಲಿ ಕಲೆಯ ನಿಲ್ಲಿಸಿದ-ಗುರುವಿನ
ಸೊಲ್ಲಲ್ಲೇ ದೈವ ಸರ್ವಜ್ಞ ||

14. ಗುರುವಚನ ಉಪದೇಶ ಗುರುವಚನವೇ ಭಕ್ತಿ
ಗುರುವಚನ ಮೋಕ್ಷ ಪರಮಾರ್ಥ ಇವು ತಾನೆ
ಪರಮಪದ ಕಾಣಾ ಸರ್ವಜ್ಞ ||

15. ಬಂಧುಗಳು ಆದವರು ಬಂದುಂಡು ಹೋಗುವರು
ಬಂಧನವ ಕಳೆಯರು-ಶ್ರೀ ಗುರುವಿಗಿಂ-
ಬಂಧವುಂಟೇ ಸರ್ವಜ್ಞ ||

16.ಉರಿಯುದಕ ಶೀತವು ಉರಗಪತಿ ಭೀಕರವು
ಗುರುವಾಜ್ಞೆಗಂಜಿ ಕೆಡುವುವು-ಇದ
ನರರರಿಯದೆ ಕೆಡುಗು ಸರ್ವಜ್ಞ ||

17.ಮಾತೆಗಿಂ ಮಿಗಿಲಿಲ್ಲ ಶಾಸ್ತ್ರದಿಂ ಹಿರಿದಿಲ್ಲ
ಜ್ಯೋತಿಯಿಂ ಬೆಳಗು ಬೇರಿಲ್ಲ ಗುರುವಿನಾ
ಮಾತಿಗೆದುರಿಲ್ಲ ಸರ್ವಜ್ಞ ||

18. ಇಂದ್ರಿಯವ ತೊರೆದಾತ ವಂದ್ಯನು ಜಗಕೆಲ್ಲಾ
ಬಿಂದುವಿನ ಬೇಧವರಿಯದ ಮಹಾತ್ಮನು
ಬೆಂದ ಬೀಜದ ತೆರದಿ ಸರ್ವಜ್ಞ ||

19. ಬೊಮ್ಮವನು ತಿಳಿದವನು ಗುಮ್ಮನಿಂತಿರಬೇಕು
ಬೊಮ್ಮವನ್ನು ತಿಳಿದುಸಿರಿದರೆ-ಖಳಹೋಗಿ
ಕೆಮ್ಮಿದಂತಕ್ಕು ಸರ್ವಜ್ಞ ||

20.ಹಸಿಯ ಸಮಿದೆಯ ತಂದು ಹೊಸೆದರುಂಟೆ ಕಿಚ್ಚು
ವಿಷಯಂಗಳ್ಳ ಮನುಜಂಗೆ- ಗುರು ಕರಣ-
ವಶವರ್ತಿಯಹುದೇ ಸರ್ವಜ್ಞ ||









1 comment:

  1. ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ ಮಂಡ್ಯ ಜಿಲ್ಲೆ jayakumarcsj@gmail.com

    ReplyDelete