Tuesday, April 5, 2016

ಲಿಂಗಾಂಗ ಸಾಮರಸ್ಯ


1. ಲಿಂಗದ ಗುಡಿಯೆಲ್ಲಿ ಲಿಂಗಿಲ್ಲದೆಡೆಯೆಲ್ಲಿ
ಲಿಂಗದೆ ಜಗವಡಗಿಹುದು-ಲಿಂಗಿವನು
ಹಿಂಗಿ ಪರವುಂಟೆ ಸರ್ವಜ್ಞ ||


2.ಓರ್ವನಲ್ಲದೆ ಮತ್ತೆ ಈರ್ವರುಂಟೆ ಮರುಳೆ
ಸರ್ವಜ್ಞನೋರ್ವ ಜಗಕೆಲ್ಲಾ-ಕರ್ತಾರ
ನೋರ್ವನೇ ದೇವ ಸರ್ವಜ್ಞ ||



3. ಹರಿಬ್ರಹ್ಮರೆಂಬವರು ಹರನಿಂದಲಾದವರು 
ಅರಸಂಗೆ ಆಳು ಸರಿಯಿಹನೆ-ಪಶುಪತಿಗೆ
ಸರಿಯಾರು ಕಾಣೆ ಸರ್ವಜ್ಞ ||

4. ಹರಿದ ತಲೆ ಬ್ರಹ್ಮಂಗೆ ಕುರಿಯ ತಲೆ ದಕ್ಷಂಗೆ
ನೆರೆ ಹತ್ತು ಜನನವು ಹರಿಗೆ-ಇವರುಗಳು-
ಮುರ ಹರನಿಗೆಣೆಯೇ ಸರ್ವಜ್ಞ ||

5.ಹುಟ್ಟೀಸುವನಜನೆಂಬ ಕಷ್ಟದ ನುಡಿ ಬೇಡ
ಹುಟ್ಟಿಸುವವ ತನ್ನ ಶಿರ ಹರಿಯೆ-ಮತ್ತೊಂದ
ಹುಟ್ಟೀಸನೇಕೆ ಸರ್ವಜ್ಞ ||


6.ಶೇಷನಿಂ ಬಲವಿಲ್ಲ ಮೋಸದಿಂ ಕಳುವಿಲ್ಲ
ನೇಸರಿಂ ಜಗಕೆ ಹಿತರಿಲ್ಲ-ಪರದೈವ
ಈಶನಿಂದಿಲ್ಲ ಸರ್ವಜ್ಞ ||

7. ಹರಭಕ್ತಿಗಲ್ಲದೆ ಹರಿದು ಹೋಗದು ಪಾಪ
ಹರಭಕ್ತಿಯುಳ್ಳ ಗುರುವರ-ನನ್ನಯ
ಗುರು ದೇವರೆಂಬೆ ಸರ್ವಜ್ಞ ||

8.ಭೂತೇಶ ಶರಣೆಂಬ ಜಾತಿ ಮಾದಿಗನಲ್ಲ
ಜಾತಿಯಲಿ ಹುಟ್ಟಿ ಭೂತೇಶ ಶರಣೆನ್ನ-
ದಾತ ಮಾದಿಗನು ಸರ್ವಜ್ಞ ||

9.ಹರಭಕುತಿ ಇಲ್ಲದ ಪರಮ ಋಷಿ ಮುಖ್ಯನೇ
ಹರಭಕ್ತಿಯುಳ್ಳ ಸ್ವಪಚನಾ-ದೊಡೆಯಾಕೆ
ಪರಮ ಋಷಿ ಎಂಬೆ ಸರ್ವಜ್ಞ ||

10.ಮಾಯೆ ಮೋಹವನೆಚ್ಚಿ ಕಾಯವನು ಕರಗಿಸುತೆ
ಆಯಾಸಗೊಳುತ ಇರಬೇಡ-ಓಂ ನಮಃಶಿ-
ವಾಯೆಂದೆನ್ನಿ ಸರ್ವಜ್ಞ ||

11.ಅಕ್ಕರವೀಲೆಕ್ಕವು ತರ್ಕಕ್ಕೆ ಗಣಿತಕ್ಕೆ 
ಮಿಕ್ಕ ಓದುಗಳು ಅಶನಕ್ಕೆ-ಮೋಕ್ಷಕ್ಕಾ-
ರಕ್ಷರವೆ ಸಾಕು ಸರ್ವಜ್ಞ ||

12.ನರರ ಬೇಡುವ ದೈವ ವರವೀಯಬಲ್ಲುದೆ
ತಿರಿವವರನಡರಿ ತಿರಿವಂತೆ-ಅದನರಿತು
ಪುರಹರನ ಬೇಡು ಸರ್ವಜ್ಞ ||

13.ಇಂದ್ರನಾನೆಯನೇರಿ ಒಂದನೂ ಕೊಡಲರಿಯ 
ಚಂದ್ರಶೆಕರನು ಮುದಿ ಎತ್ತನೇರಿ ಬೇ-
ಕೆಂದುದ ನೀಡುವ ಸರ್ವಜ್ಞ ||

14.ಲಿಂಗಕ್ಕೆ ತೋರಿಸುತ ನುಂಗುವಾತನೆ ಕೇಳು
ಲಿಂಗವುಂಬುವುದೇ-ಇದನರಿತು ನೀ-
ಜಂಗಮಕೆ ನೀಡೆಂದ ಸರ್ವಜ್ಞ ||

15. ದೇಹಿಯೆನಬೇಡ ನಿರ್ದೇಹಿ ಜಂಗಮ ದೇವ 
ದೇಹಗುಣ್ದಾಶೆಯಳಿದರೆ-ಆತನಿ-
ರ್ದೇಹಿ ಕಂಡಯ್ಯಾ ಸರ್ವಜ್ಞ ||

16.ಒಮ್ಮನದಲ್ಲಿ ಶಿವಪೂಜೆ ಗಮ್ಮನೆ ಮಾಡುವುದು
ಇಮ್ಮನವಿಡಿದು ಕೆಡಬೇಡ-ವಿಧಿವಶವು
ಸುಮ್ಮನೆ ಕೆಡುಗು ಸರ್ವಜ್ಞ ||

17.ಶಿವಪೂಜೆ ಮಾಡುವುದು ಶಿವನ ಕೊಂಡಾಡುವುದು 
ಶಿವನೊಳು ನೆನಹು ಬಿಡದಿರೆ-ಕಂಡಯ್ಯ
ಶಿವಲೋಕದರಿವು ಸರ್ವಜ್ಞ ||

18. ಅಂಗವನು ಲಿಂಗವನು ಸಂಗೊಳಿಸಲೆಂತಕ್ಕು
ಲಿಂಗದೆ ನೆನಹು ಘನವಾಗೆ-ಆ ಅಒಂಗ
ಲಿಂಗವಂತಕ್ಕು ಸರ್ವಜ್ಞ ||

19 . ರುದ್ರನಕ್ಷಿಯ ಮಣಿಯ ಹೊದ್ದಿ ದರಿಸಿರ್ಪಂಗೆ
ಹೊದ್ದವು ಪಾಪಭವಮಾಲೆ-ಅವ ನಿಜ
ರುದ್ರನೇ ಅಕ್ಕು ಸರ್ವಜ್ಞ ||

20 .  ಲಿಂಗದಾ ದರುಶನ ಲಿಂಗದಾ ಸ್ಪರುಷನ
ಲಿಂಗ ಸಹ ಸರ್ವ ಸುಖ ಹೊಂದಿದವ ತಾ
ಲಿಂಗವೇ ಅಕ್ಕು ಸರ್ವಜ್ಞ ||

21 . ಒಪ್ಪದಾ ನುಡಿಯೇಕೆ ಪುಷ್ಪವಿಡುವುದು ಏಕೆ
ಅರ್ಪಿತದ ಭವಣೆ ಏತಕ್ಕೆ-ಲಿಂಗದಾ-
ನೆಪ್ಪರಿಯದವಂಗೆ  ಸರ್ವಜ್ಞ ||

22. ಕಂಗಳಿಚ್ಚೆಗೆ ಒಲಿದು ಭಂಗಗೊಳುವುದು ಬೇಡ 
ಲಿಂಗದಲಿ ಮನವಿರಿಸಿ ಸತ್ಯದಾ ನೆಲೆಯು ತಾ
ಲಿಂಗವೆಂದರುಹು  ಸರ್ವಜ್ಞ ||

23. ಓದುವಾದಗಳೇಕೆ ಗಾದೆಯಾ ಮಾತೇಕೆ
ವೇದ ಶಾಸ್ತ್ರ ಪುರಾಣವೇಕೆ-ಲಿಂಗದ
ಹಾದಿಯರಿಯದವಂಗೆ  ಸರ್ವಜ್ಞ ||

24. ಅರ್ಪಿತದ ಭೇಧವನು ತಪ್ಪದೇ ಕೊಡುವಾತ
ಸರ್ಪಭೂಷಣನ ನಿಲುವಿಹನು ನಿಜ ಸುಖದೊ-
ಳೊಪ್ಪುತಲೇ ಇಹನು  ಸರ್ವಜ್ಞ ||

25. ಅರಿವ ಕೂಡಿತು ಪ್ರಾಣ ಕುರುವ ಬೆರೆಯಿತು ದೇಹ
ಹರಿದೋಯ್ತು ಭವಪಾಷ-ಮುಕ್ತಿಯಾ
ನೆರೆಗೆ ನಿರ್ವಯಲು  ಸರ್ವಜ್ಞ ||

26. ಲಿಂಗದಲಿ ಮನವಾಗಿ ಲಿಂಗದಲಿ ನೆನದಾಗಿ
ಲಿಂಗದಲಿ ನುಡಿ ನೋಟ ಕೂಟವಾದ ತಾ
ಲಿಂಗವೇ ಅಕ್ಕು  ಸರ್ವಜ್ಞ ||

27.ಸಂಗನ ಎಡೆಲೇಸು ಗಂಗೆಯ ತಡಿಲೇಸು
ಲಿಂಗಸಂಗಿಗಳ ನುಡಿಲೇಸು-ಶರಣರ
ಸಂಗವೇ ಲೇಸು  ಸರ್ವಜ್ಞ ||

28.ಮಲೆಯ ಜಡ ಮರದೊಳಗೆ ಸಲೆಗಂಧವಿದ್ದಂತೆ
ಸುಲಲಿತ ಶರಣನ ಹೃದಯದಿ-ಶಿವ ತಾ
ನೆಲೆಸಿಹನು ಕಂಡ್ಯ  ಸರ್ವಜ್ಞ ||

29.ನೋತ ಶಿವ ಲಿಂಗದಲಿ ಕೂಟ ಜಂಗಮದಲ್ಲಿ
ನಾಟಿ ತನುವು ಗುರುವಿನಲಿ-ಕೂಡೆ ತಾ-
ಸಾಟಿಯಿಲ್ಲದ ಶರಣ  ಸರ್ವಜ್ಞ ||

30.ಸಿರಿಯು ಬಂದರೆ ಲೇಸು ಸ್ತಿರದ ಜವ್ವನ ಲೇಸು 
ಮರಣ ತಪ್ಪಿದರೆ ಕರಲೇಸು-ಲಿಂಗಿಗೆ 
ಶರಣವೇ ಲೇಸು  ಸರ್ವಜ್ಞ ||

31.ಲಿಂಗವಿರಹಿತನಾಗಿ ನುಂಗದಿರು ಏನನ್ನೂ
ತಿಂಗಳಲಿ ಸತ್ತ ಹಳೆ ಮಾಂಸವನು
ನುಂಗಿದಂತಕ್ಕು  ಸರ್ವಜ್ಞ ||  

32.ಲಿಂಗಕ್ಕೆ ತೋರದೆ ತಿಂದೊಡನೆ ಏನಹುದು
ಭಂಗ ಬಂಧವನು ಘನವಹುದು-ಆತನ
ಲಿಂಗ ಹಿಂಗಿಹುದು  ಸರ್ವಜ್ಞ ||

33. ಭಕ್ತರೊಡನಾಡುವುದು ಭಕ್ತರೊಡಗೂಡುವುದು
ಭಕ್ತರೊಳು ಭಕ್ತಿ ವೆರಸಿರ್ಪ-ಭಕ್ತ ನಿಜ
ಮುಕತನಂತಕ್ಕು  ಸರ್ವಜ್ಞ ||

34. ಲಿಂಗದಿಂ ಘನವಿಲ್ಲ ಗಂಗೆಗೆ ಹೊಲೆಯಿಲ್ಲ
ಕಂಗಳಿಂ ಅಧಿಕ ಹಿತರಿಲ್ಲ- ಭಕ್ತಗಿಂ-
ಸಂಗವಿನ್ನಿಲ್ಲ  ಸರ್ವಜ್ಞ ||

35.ಎಷ್ಟು ಬಗೆಯಾರತಿಯ ಮುಟ್ಟಿಸಿ ಫಲವೇನು 
ನಿಷ್ಟೆ ಇಲ್ಲದವನ ಶಿವಪೂಜೆ -ಕಡೆಯಲ್ಲಿ
ನಷ್ಟವಾದಂತೆ  ಸರ್ವಜ್ಞ ||

36.ಇಷ್ಟಲಿಂಗದಿ ಮನವ ನೆಟ್ಟನೆ ನಿಲ್ಲಿಸದೆ
ಕಷ್ಟ ಭ್ರಮೆಗಳಲ್ಲಿ ಮುಳುಗಿದವ-ಕರ್ಮದಾ
ಬುಟ್ಟಿಯಲಿ ಹೋಹ  ಸರ್ವಜ್ಞ ||

37.ಕೊಲುವ ಕೈಯಳು ಪೂಜೆ ಮೆಲುವ ಬಾಯೊಳು ಮಂತ್ರ
ಸಲೆ ಪಾಪದಾ ಮನದೊಳಗೆ-ಪೂಜಿಪನು 
ಹೊಲೆಯನಂತಕ್ಕು  ಸರ್ವಜ್ಞ ||

38. ಕಂಡವರ ಕಂಡು ಕೈ ಕೊಡು ಲಿಂಗವ ಕಟ್ಟಿ
ಕೊಡಾಡಲರಿಯದವಗಾಲಿಂಗ-ಉರಿ-
ಕೆಂಡದಂತಿಹುದು  ಸರ್ವಜ್ಞ ||

39.ಹಲವ ನೋದಿದೊಡೇನು ಚೆಲುವನಾದೊಡೆ ಏನು
ಕುಲವಂತನಾಗಿ ಫಲವೇನು-ಲಿಂಗದ
ಬಲವಿಲ್ಲದನ್ನಕ್ಕ  ಸರ್ವಜ್ಞ ||

40. ಹುಸಿವನ ಶಿವ ಪೂಜೆ ಮಸಿವಣ್ಣವೆಂತೆನಲು
ಮುಸುಕಿರ್ದಮಲವನೊಳಗಿರಿಸಿ-ಪೃಷ್ಠ್ವನು
ಹಿಸುಕಿ ತೊಳೆದಂತೆ  ಸರ್ವಜ್ಞ ||
ಲಿಂಗದ ಮಹಿಮೆ

೧೦೨.ಕಡು ಭಕ್ತನಾಗಲಿ ಜಡೆಧಾರಿಯಾಗಲಿ
ನೆಡೆವ ವೃತ್ತಿಯಲಿ ನೆಡೆದರೆ-ಆ ಭಕ್ತಿ 
ಕೆಡುವುದೇ  ಸರ್ವಜ್ಞ ||

41.ನಟ್ಟಿರ್ದ ಕಲ್ಲಿಂಗೆ ಒಟ್ಟಿರ್ದ ಮಣ್ಣಿಂಗೆ
ಕಟ್ಟಿರ್ದ ಲಿಂಗವಡಿಯಾಗಿ ಬೀಳುವನಿ-
ಗಿಷ್ಟವೆಲ್ಲಿಯದು ಸರ್ವಜ್ಞ ||

42. ತನ್ನೊಳಿದ ಲಿಂಗವನು ಮನ್ನಿಸಲಿ ಕರಿಯದೆ
ಭಿನ್ನಣದಿ ಕಡೆದ ಪ್ರತಿಮೆಗೆರಗುವ ಅನ್ನೆಯವ ನೋಡು ಸರ್ವಜ್ಞ ||


43. ನ್ಎಣಿಸುತಿರ್ಪದು ಬಾಯಿ ದಣಿಯುತಿರುವುದು ಬೆರಳು
ಖ್ಷಣಕೊಮ್ಮೆ ಗುಣಿರಿಸುವನ-ಜಪಕೊಂದು 
ಎಣಿಕೆಯೂ ಉಂಟೆ ಸರ್ವಜ್ಞ ||

44.ಕರ್ಮಿಗೆ ಶಿವಭಕ್ತಿ ಒಮ್ಮೆ ದೊರಕೊಂಬುದೇ
ಚರ್ಮವನು ತಿಂಬ ಶುನಕಂಗೆ-ಪಾಯಸದ
ಸಮ್ಮಂದವೇಕೆ ಸರ್ವಜ್ಞ ||


45.ಚಿತ್ತವಿಲ್ಲದೆ ಗುಡಿಯ ಸುತ್ತಿದೊಡೆ ಫಲವೇನು
ಎತ್ತು ಗಾಣವನು ಹೊತ್ತು ತಾ ಬರಿ-
ಸುತ್ತಿ ಬಂದಂತೆ ಸರ್ವಜ್ಞ ||

೧೦೮. ಸತಿಯರಾದೊಡೆ ಏನು ಸುತರು ಆದೊಡೆ ಏನು
ಶತಕೋಟಿ ಧನವಿರ್ದೊಡೇನು-ಭಕ್ತಿಯ
ಸ್ಥಿತಿ ಇಲ್ಲದನಕ ಸರ್ವಜ್ಞ ||

46.ಜ್ವರವಿರುವ ಮನುಜಂಗೆ ನೊರೆವಾಲು ಕಹಿಯಕ್ಕು
ನರಕದಲಿ ಬೀಳುವಧಮಂಗೆ ಶಿವಭಕ್ತಿ
ಹಿರಿದು ಕಹಿಯಕ್ಕು ಸರ್ವಜ್ಞ ||

47. ಮನೆಯೇನು ಮಠವೇನು ನೆನಹು ನಿಂದರೆ ಸಾಕು
ಮನದಲ್ಲಿ ಶಿವನ ನೆನೆಯದವ-ಪರ್ವತದ 
ಕೊನೆಯಲ್ಲಿದ್ದೇನು ಸರ್ವಜ್ಞ ||

48. ಆಗಿಲ್ಲ ಹೋಗಿಲ್ಲ ಮೇಗಿಲ್ಲ ಕೆಳಗಿಲ್ಲ
ತಾಗಿಲ್ಲ ತಪ್ಪು ತಡೆಯಿಲ್ಲ-ಲಿಂಗಕ್ಕೆ
ದೇಗುಲವೇ ಇಲ್ಲ ಸರ್ವಜ್ಞ ||

49.ಪ್ರಾಣನೂ ಪರಮನು ಕಾಣದೆ ಒಳಗಿರಲು
ತ್ರಾಣವಿರದ ಶಿಲೆ ತಂದು-ಅದಕೇ ಲಿಂಗವೆಂಬ
ವಾಣಿಯದು ಬೇಡೆಂದ ಸರ್ವಜ್ಞ ||

50. ಧ್ಯಾನದಾ ಹೊಸ ಬತ್ತಿ ಮೌನದಾ ತಿಳಿದುಪ್ಪ
ಸ್ವಾನುಭವವೆಂಬ ಬೆಳಗಿನ ಜ್ಯೋತಿ-ಅ
ಜ್ಞಾನವಂ ಸುಡುಗು ಸರ್ವಜ್ಞ ||


51. ಕಲ್ಲಿನಲಿ ಮಣ್ಣಿನಲಿ ಮುಳ್ಳಿನಾ ಕೊನೆಯಲ್ಲಿ
ಎಲ್ಲಿ ನೆನೆದೊಡಲ್ಲಿ ಶಿವನಿರ್ಪ ಅವ-
ನಿನ್ನಲ್ಲಿಯೇ ಇರುತಿರ್ಪ ಸರ್ವಜ್ಞ ||
============================

No comments:

Post a Comment