Thursday, April 7, 2016

ಲಿಂಗದ ಮಹಿಮೆ

1.ಕಡು ಭಕ್ತನಾಗಲಿ ಜಡೆಧಾರಿಯಾಗಲಿ

ನೆಡೆವ ವೃತ್ತಿಯಲಿ ನೆಡೆದರೆ-ಆ ಭಕ್ತಿ 
ಕೆಡುವುದೇ  ಸರ್ವಜ್ಞ ||

2. ನಟ್ಟಿರ್ದ ಕಲ್ಲಿಂಗೆ ಒಟ್ಟಿರ್ದ ಮಣ್ಣಿಂಗೆ
ಕಟ್ಟಿರ್ದ ಲಿಂಗವಡಿಯಾಗಿ ಬೀಳುವನಿ-
ಗಿಷ್ಟವೆಲ್ಲಿಯದು ಸರ್ವಜ್ಞ ||


3. ತನ್ನೊಳಿದ ಲಿಂಗವನು ಮನ್ನಿಸಲಿ ಕರಿಯದೆ
ಭಿನ್ನಣದಿ ಕಡೆದ ಪ್ರತಿಮೆಗೆರಗುವ 
ಅನ್ನೆಯವ ನೋಡು ಸರ್ವಜ್ಞ ||


4. ನ್ಎಣಿಸುತಿರ್ಪದು ಬಾಯಿ ದಣಿಯುತಿರುವುದು ಬೆರಳು
ಖ್ಷಣಕೊಮ್ಮೆ ಗುಣಿರಿಸುವನ-ಜಪಕೊಂದು 
ಎಣಿಕೆಯೂ ಉಂಟೆ ಸರ್ವಜ್ಞ ||

5.ಕರ್ಮಿಗೆ ಶಿವಭಕ್ತಿ ಒಮ್ಮೆ ದೊರಕೊಂಬುದೇ
ಚರ್ಮವನು ತಿಂಬ ಶುನಕಂಗೆ-ಪಾಯಸದ
ಸಮ್ಮಂದವೇಕೆ ಸರ್ವಜ್ಞ ||


6.ಚಿತ್ತವಿಲ್ಲದೆ ಗುಡಿಯ ಸುತ್ತಿದೊಡೆ ಫಲವೇನು
ಎತ್ತು ಗಾಣವನು ಹೊತ್ತು ತಾ ಬರಿ-
ಸುತ್ತಿ ಬಂದಂತೆ ಸರ್ವಜ್ಞ ||

7. ಸತಿಯರಾದೊಡೆ ಏನು ಸುತರು ಆದೊಡೆ ಏನು
ಶತಕೋಟಿ ಧನವಿರ್ದೊಡೇನು-ಭಕ್ತಿಯ
ಸ್ಥಿತಿ ಇಲ್ಲದನಕ ಸರ್ವಜ್ಞ ||

8.ಜ್ವರವಿರುವ ಮನುಜಂಗೆ ನೊರೆವಾಲು ಕಹಿಯಕ್ಕು
ನರಕದಲಿ ಬೀಳುವಧಮಂಗೆ ಶಿವಭಕ್ತಿ
ಹಿರಿದು ಕಹಿಯಕ್ಕು ಸರ್ವಜ್ಞ ||

9. ಮನೆಯೇನು ಮಠವೇನು ನೆನಹು ನಿಂದರೆ ಸಾಕು
ಮನದಲ್ಲಿ ಶಿವನ ನೆನೆಯದವ-ಪರ್ವತದ 
ಕೊನೆಯಲ್ಲಿದ್ದೇನು ಸರ್ವಜ್ಞ ||

10. ಆಗಿಲ್ಲ ಹೋಗಿಲ್ಲ ಮೇಗಿಲ್ಲ ಕೆಳಗಿಲ್ಲ
ತಾಗಿಲ್ಲ ತಪ್ಪು ತಡೆಯಿಲ್ಲ-ಲಿಂಗಕ್ಕೆ
ದೇಗುಲವೇ ಇಲ್ಲ ಸರ್ವಜ್ಞ ||

11.ಪ್ರಾಣನೂ ಪರಮನು ಕಾಣದೆ ಒಳಗಿರಲು
ತ್ರಾಣವಿರದ ಶಿಲೆ ತಂದು-ಅದಕೇ ಲಿಂಗವೆಂಬ
ವಾಣಿಯದು ಬೇಡೆಂದ ಸರ್ವಜ್ಞ ||

12 ಧ್ಯಾನದಾ ಹೊಸ ಬತ್ತಿ ಮೌನದಾ ತಿಳಿದುಪ್ಪ
ಸ್ವಾನುಭವವೆಂಬ ಬೆಳಗಿನ ಜ್ಯೋತಿ-ಅ
ಜ್ಞಾನವಂ ಸುಡುಗು ಸರ್ವಜ್ಞ ||


13. ಕಲ್ಲಿನಲಿ ಮಣ್ಣಿನಲಿ ಮುಳ್ಳಿನಾ ಕೊನೆಯಲ್ಲಿ
ಎಲ್ಲಿ ನೆನೆದೊಡಲ್ಲಿ ಶಿವನಿರ್ಪ ಅವ-
ನಿನ್ನಲ್ಲಿಯೇ ಇರುತಿರ್ಪ ಸರ್ವಜ್ಞ ||
























No comments:

Post a Comment