Monday, September 13, 2021

ಸರ್ವಜ್ಞ- ವಚನಮಾಲಿಕೆ

ಕೆಲವ೦ ಬಲ್ಲವರಿ೦ದ ಕಲ್ತು

ಕೆಲವ೦ ಮಾಳ್ಪವರಿ೦ದ ಕ೦ಡು ಮತ್ತೆ

ಹಲವ೦ ತಾನೆ ಸ್ವತಃ ಮಾಡಿ ತಿಳಿ ಎ೦ದ  ಸರ್ವಜ್ಞ ||೧ ||  


ಕಚ್ಚೆ ಕೈ ಬಾಯ್ಗಳು  ಇಚ್ಚೆಯಲ್ಲಿ ಇದ್ದಿಹರೆ 

ಅಚ್ಯುತನಪ್ಪ  ಅಜನಪ್ಪ  ಲೋಕದಲಿ 

ನಿಶ್ಚಿಂತನಪ್ಪ  ಸರ್ವಜ್ಞ || ೨ ||  


ಅಕ್ಕರವು ಲೆಕ್ಕಕ್ಕೆ ತರ್ಕ ತಾ ವಾದಕ್ಕೆ

ಮಿಕ್ಕ ಓದುಗಳು ತಿರುಪೆಗೆ ಮೋಕ್ಷಕ್ಕೆ

ಎರಡಕ್ಕರವೆ ಸಾಕೆ೦ದ ಸರ್ವಜ್ಞ || ೩ ||  



ಸೇ೦ದಿಯನು ಸೇವಿಪನು ಹಂದಿಯಂತಿರುತಿಹನು

ಹಂದಿಯೊಂದೆಡೆ ಉಪಕಾರಿ 

ಕುಡುಕ  ಹಂದಿಗೂ ಕಡಿಮೆ ಸರ್ವಜ್ಞ  || ೪ ||

Thursday, April 7, 2016

ಲಿಂಗದ ಮಹಿಮೆ

1.ಕಡು ಭಕ್ತನಾಗಲಿ ಜಡೆಧಾರಿಯಾಗಲಿ

ನೆಡೆವ ವೃತ್ತಿಯಲಿ ನೆಡೆದರೆ-ಆ ಭಕ್ತಿ 
ಕೆಡುವುದೇ  ಸರ್ವಜ್ಞ ||

2. ನಟ್ಟಿರ್ದ ಕಲ್ಲಿಂಗೆ ಒಟ್ಟಿರ್ದ ಮಣ್ಣಿಂಗೆ
ಕಟ್ಟಿರ್ದ ಲಿಂಗವಡಿಯಾಗಿ ಬೀಳುವನಿ-
ಗಿಷ್ಟವೆಲ್ಲಿಯದು ಸರ್ವಜ್ಞ ||

Wednesday, April 6, 2016

ಎಲ್ಲರಿಗೂ ಯುಗಾದಿ ಹಬ್ಬದ ಹಾರ್ಧಿಕ ಶುಭಕಾಮನೆಗಳು

ಬೇವು-ಬೆಲ್ಲ, ಸಿಹಿ-ಕಹಿ, ಕಷ್ಟ ಸುಖ, ನೋವು-ನಲಿವು, ನಗುವು-ಅಳು ಅಷ್ಟೇ ಏಕೆ ಹುಟ್ಟು ಸಾವು ಒಂದೇ ನಾಣ್ಯದ ಎರಡು ಮುಖಗಳ ಹಾಗೆ ಒಂದರ ಬದಿಗೆ ಇನ್ನೊಂದು ಇದ್ದೇ ಇರುತ್ತವೆ, ಎಲ್ಲವನ್ನು ಸಮ ಚಿತ್ತದಿಂದ, ಸಮದೃಷ್ಟಿಯಿಂದ ಸ್ವೀಕರಿಸುವುದೇ ಬಾಳಿನ ನಿಜವಾದ ಮಾನವ ಧರ್ಮ.

ದುರ್ಮುಖಿ ನಾಮ ಸಂವತ್ಸರವು ತಮಗೆಲ್ಲರಿಗೂ ಶುಭ ತರಲೆಂದು ದುಖಃ ನೋವುಗಳನ್ನು ತಾಳ್ಮೆಯಿಂದ ಎದುರಿಸುವ ಶಕ್ತಿ ಕೊಟ್ಟು ಸುಖ ನೆಮ್ಮದಿ ಆರೋಗ್ಯದಾಯಕ ಜೀವನವನ್ನು ಕರುಣಿಸಲೆಂದು ಹಾರೈಸೋಣ !

Tuesday, April 5, 2016

ಲಿಂಗಾಂಗ ಸಾಮರಸ್ಯ


1. ಲಿಂಗದ ಗುಡಿಯೆಲ್ಲಿ ಲಿಂಗಿಲ್ಲದೆಡೆಯೆಲ್ಲಿ
ಲಿಂಗದೆ ಜಗವಡಗಿಹುದು-ಲಿಂಗಿವನು
ಹಿಂಗಿ ಪರವುಂಟೆ ಸರ್ವಜ್ಞ ||


2.ಓರ್ವನಲ್ಲದೆ ಮತ್ತೆ ಈರ್ವರುಂಟೆ ಮರುಳೆ
ಸರ್ವಜ್ಞನೋರ್ವ ಜಗಕೆಲ್ಲಾ-ಕರ್ತಾರ
ನೋರ್ವನೇ ದೇವ ಸರ್ವಜ್ಞ ||

Monday, April 4, 2016

ಗುರುವಿನ ಮಹಿಮೆ


1. ಪರತತ್ವ ತನ್ನೊಳಗೆ ಎರವಿಲ್ಲದಿರುತಿರಲು 
ಪರದೇಶಿಯಾಗಿ ಇರುತಿರುವಾತನ 
ಪರಮ ಗುರುವೆಂಬೆ ಸರ್ವಜ್ಞ ||

2. ಹರ ತನ್ನ ದೊಳಗಿರ್ದ ಗುರು ತೋರಲರಿಯನೆ
ಮರನೊಳಗಗ್ನಿ ಇರುತಿರ್ದು-ತನ್ನ ತಾ-
ನರಿವುದನು ಕಂಡೆ ಸರ್ವಜ್ಞ ||

Friday, April 1, 2016

ಜಾತಿ ವಿಜಾತಿಗಳು ?

 1.ಎಲುವೀಕಾಯಕ್ಕೆ ಸಲೆ ಚರ್ಮದ ಹೊದಿಕೆ
ಮಲ ಮೂತ್ರ ಕ್ರಿಮಿಗಳೊಳಗಿರ್ದ ದೇಹಕ್ಕೆ
ಕುಲವಾವುದಯ್ಯ ಸರ್ವಜ್ಞ ||

2.ಬೆಂದಾವಿಗೆಯ ಭಾಂಡ ಒಂದೊಂದು ಭೋಗವನು 
ಅಂದಂದಿಗುಂಡು ಒಡೆದು ಹಂಚಾದಂತೆ 
ಬಿಂದುವಿನ ದೇಹ ಸರ್ವಜ್ಞ ||

Thursday, March 31, 2016

ಸರ್ವಜ್ಞನ ಹುಟ್ಟು

1. ಮುನ್ನ ಪೂರ್ವದಲಾನು ಪನ್ನಗಧರನಾಳು 

ಎನ್ನಯ ಪೆಸರು ಪುಷ್ಪದತ್ತನು ಎಂದು 
ಮುನ್ನಿಪರು ನೋಡು ಸರ್ವಜ್ಞ ||
ಈ ಹಿಂದೆ ನಾನು ಪರಶಿವನ ಸೇವಕ ನನ್ನ ಹೆಸರು ಪುಷ್ಪದತ್ತ
ಎಂದು ಬಲ್ಲವರು ಹೇಳುತ್ತಾರೆ

2. ಅಂದಿನಾ ಪುಷ್ಪದತ್ತ ಬಂದ ವರರುಚಿಯಾಗಿ
ಮುಂದೆ ದೇವಸಾಲೆ ಸರ್ವಜ್ನನೆಂದೆನಿಸಿ 
ನಿಂದವನನ್ ನಾನೇ ಸರ್ವಜ್ಞ ||
ಹಿಂದಿನ ಆ ಪುಷ್ಪದತ್ತ ನಾದ ನಾನು ವರರುಚಿಯಾಗಿ ಬಂದು ಇದೀಗ
ದೇವಸಾಲೇ ಸರ್ವಜ್ಞನೆನೆಸಿರುವನು ನಾನೇ